ನಮ್ಮ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆಯನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು. ಅದರಲ್ಲಿ ನಮ್ಮ ಮಕ್ಕಳು ಪೇಜಾವರ ಶ್ರೀಗಳಾದ ವಿಶ್ವೇಶ್ವರ ತೀರ್ಥ ಸ್ವಾಮೀಜಿ , ಪೂಜ್ಯರಾದ ಡಾ|| ಡಿ. ವೀರೇಂದ್ರ ಹೆಗ್ಗಡೆ ಹಾಗೂ ಡಾ|| ನ . ವಜ್ರಕುಮಾರ್ ಅವರ ವೇಷಧಾರಿ ಗಳಾಗಿ ಆಗಮಿಸಿದ್ದರು ಮತ್ತು ಕನ್ನಡ ನಾಡು ನುಡಿಗಾಗಿ ದುಡಿದ ಮಹನೀಯರ ವೇಷ ಭೂಷಣಧಾರಿಗಳಾಗಿ ಕಾರ್ಯಕ್ರಮಕ್ಕೆ ಮೆರಗು ತಂದರು. ಅದಲ್ಲದೇ ನಮ್ಮ ಕನ್ನಡ ನಾಡಿನ ವಿವಿಧ ಭಾಗಗಳ ಬಗೆ ಬಗೆಯ ಖಾದ್ಯಗಳನ್ನು ಪ್ರದರ್ಶಿಸಿದರು.
ಈ ಸಂದರ್ಭದಲ್ಲಿ ನಮ್ಮ ಸಂಸ್ಥೆಯ ನೂತನ ಕಾರ್ಯದರ್ಶಿಗಳಾದ ಡಾ|| ಅಜಿತ್ ಪ್ರಸಾದ್ ಸರ್ ರವರಿಗೆ ಹುಬ್ಬಳ್ಳಿ – ಧಾರವಾಡ ಮಹಾನಗರ ಪಾಲಿಕೆಯು ನೀಡಿದ “ಧೀಮಂತ ವ್ಯಕ್ತಿ ಕನ್ನಡ ರಾಜ್ಯೋತ್ಸವ ೨೦೨೨” ಗೌರವದ ಅಂಗವಾಗಿ ನಮ್ಮ ಶಾಲೆಯಲ್ಲಿಯೂ ಗಣ್ಯರಿಗೆ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಡಾ|| ಅಜಿತ್ ಪ್ರಸಾದ್ ಸರ್ ಅವರು ಶಿಕ್ಷಣದಲ್ಲಿ ಪ್ರಾದೇಶಿಕ ಭಾಷೆಗಳ ಮಹತ್ವ ಮತ್ತು ಹೊಸ ಶಿಕ್ಷಣ ನೀತಿಯ ನಿಯಮಗಳ ಬಗ್ಗೆ ಕೂಲಂಕುಷವಾಗಿ ತಿಳಿಸಿದರು. ಕಾರ್ಯಕ್ರಮವನ್ನು ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದರು.
ನವೆಂಬರ್ ೧ ರಂದು ನಗರದ ಆರ್.ಎನ್.ಶೆಟ್ಟಿ ಕ್ರೀಡಾಂಗಣದಲ್ಲಿ , ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ಏರ್ಪಡಿಸಲಾಗಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ನಮ್ಮ ಶಾಲೆಯ ೭ ,೮ ಮತ್ತು ೯ ನೇ ತರಗತಿಯ ೪೦೩ ಮಕ್ಕಳು ಸಾಮೂಹಿಕ ನೃತ್ಯವನ್ನು ಪ್ರದರ್ಶಿಸಿದರು.